ಅಥಣಿ: ಕಬ್ಬಿಗೆ ಪ್ರತಿ ಟನ್‌ಗೆ 3,500 ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದೆ. ರೈತ ಮುಖಂಡರಾದ ಬಸವರಾಜ್, ಮಲ್ಲಪ್ಪ ಹಂಚನಾಳ, ಬುಡ್ಡಾಸಾಬ ಅತ್ತಾರ, ಕಾಕಾಸಾಬ್ ರುದ್ರಗೌಡ
ಗಿರಮಲ್ಲ ತೇಲಿ
ಬಾದಷ ಅತ್ತಾರ
ಹಾಗೂ ಮಲ್ಲು ಕೋರೆ ಅವರ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ರೈತರು “ಜೈ ಜವಾನ್, ಜೈ ಕಿಸಾನ್” ಹಾಗೂ “ರೈತ ಸಂಘದ ಹೋರಾಟಕ್ಕೆ ಜಯವಾಗಲಿ” ಎಂಬ ಘೋಷಣೆಗಳನ್ನು ಕೂಗುತ್ತಾ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ ಬಸವರಾಜ್ ಹೇಳಿದರು, “ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರಾಜಕಾರಣಿಗಳು ಒಂದಾಗಿ ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ. ಕಳೆದ ನಾಲ್ಕು ಐದು ವರ್ಷಗಳಿಂದ ಕಬ್ಬು ಬೆಳೆಯಲು ಸೂಕ್ತ ಬೆಲೆ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚು ಬೆಲೆ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪ್ರತಿ ಟನ್‌ಗೆ 3,500 ನಿಗದಿ ಮಾಡಬೇಕು,” ಎಂದು ಆಗ್ರಹಿಸಿದರು.
ಅವರು ಮುಂದುವರೆದು, “ಮುಖ್ಯಮಂತ್ರಿ ಹಾಗೂ ಜಿಲ್ಲಾ ಸಚಿವರು ತಕ್ಷಣ ಗಮನಹರಿಸಿ ಸಂಜೆಯೊಳಗೆ ನಿರ್ಧಾರ ಕೈಗೊಂಡಿಲ್ಲದಿದ್ದರೆ ಹೋರಾಟವನ್ನು ಉಗ್ರಗೊಳಿಸುವಂತಾಗುತ್ತದೆ. ನಾವು ಬೇಡುತ್ತಿರುವುದು ದಯೆಯಲ್ಲ - ಹಕ್ಕಿನ ಪ್ರತಿಫಲ,” ಎಂದು ಎಚ್ಚರಿಕೆ ನೀಡಿದರು.
ಇನ್ನೊಬ್ಬ ರೈತ ಮುಖಂಡ ಎಲ್ಲಪ್ಪ ಹಂಚನಾಳ ಹೇಳಿದರು, “ಇದು ನಮ್ಮ ಹಕ್ಕಿನ ಬೇಡಿಕೆ. ನಾವು ಬೆವರು ಸುರಿಸಿ ದುಡಿದ ಹಣವನ್ನು ಕೇಳುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯುತ್ತದೆ. ಜಿಲ್ಲಾಧಿಕಾರಿಗಳು ನಮ್ಮೊಂದಿಗೆ ಮಾತುಕತೆ ನಡೆಸಿದ್ದಾರೆ, ಆದರೆ ಅಂತಿಮ ನಿರ್ಧಾರ ಕೈಗೊಳ್ಳಬೇಕಾದದ್ದು ಸರ್ಕಾರ ಮತ್ತು ಸಕ್ಕರೆ ಸಚಿವರು. ಅವರು ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಹೇಳಿದರು.
ಎರಡು ವಾರದ ಹತ್ತಿರವಾಗುತ್ತಿದ್ದರೂ ಸರ್ಕಾರದ ಯಾವುದೇ ಪ್ರತಿನಿಧಿ ಅಥವಾ ಸಚಿವರು ಸ್ಥಳಕ್ಕೆ ಭೇಟಿ ನೀಡದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರದಿಂದ ಸ್ಪಂದನೆ ದೊರೆಯುವವರೆಗೂ ಧರಣಿ ಮುಂದುವರೆಯಲಿದೆ ಎಂದು ರೈತರು ಸ್ಪಷ್ಟಪಡಿಸಿದ್ದಾರೆ...
ವರದಿ
ಹಜರತಅಲಿ ಕಮಾಲನವ








